ಹತ್ತಿಯ ನರ ಕಿತ್ತು, ನೆತ್ತಿ
ನೆಟ್ಟಗೆ ನೀವಿ
ಬಿಗಿದು ಬಂಧಿಸಿದ ಬಟ್ಟೆಯಲ್ಲ
ನನ್ನಮ್ಮನ ಸೀರೆ
ರೆಟ್ಟೆ ಹಿಂಡಿದ ಬೆವರ ಬಸಿರ ಕೂಸು
ಪ್ರಸವ ಸುಖದ ಸತ್ತೆ ಸವಿದ ನಾಲಿಗೆ
ಹೊಕ್ಕಳು ಕುಯ್ದಾಗ ಕುಡುಗೋಲು
ಕಣ್ಣೀರಿಟ್ಟ ಜಲವರ್ಣಚಿತ್ರ
ನವಮಾಸದ ನಂತರವೂ ಜತನದಿ ಜೋಕಾಲಿಯಾದ
ಜೊತೆಗಾತಿ
ಮಡಿಲಲಿ ಮಲಗಿ ಪೂರ್ತಿ, ಎದೆಹಾಲು
ಕುಡಿವಾಗ ದೃಷ್ಟಿಯಾಗದಂತೆ ಅಡ್ಡನಿಂತ ಅಕ್ಕ
ಜೋ ಜೋ ಹಾಡಿಗೆ ಜಂತೆಯ ಕಿವಿ ಹಿಂಡಿ
ಕಿರ್ರು ಕಿರ್ರನೆ ತಾಳ ಹಾಕಿದ ವಾದ್ಯ
ಹೊಸಬರ ಕಂಡು ನಾಚುವಾಗ, ಕತ್ತಲ
ಕಂಡು ಬೆಚ್ಚುವಾಗ ಇದೇ ರಕ್ಷಾಕವಚ
ಸಿಗಿದ ಚಡ್ಡಿಗೆ ತನ್ನ ತೊಗಲೇ
ಬಗೆದು ಸೂಜಿ ದಾರದಿ ಹೊಲೆದ ಕಸೂತಿ
ಅಪ್ಪನಾ ಕ್ರೌರ್ಯಕ್ಕೆ ಅಡ್ಡಲಾಗಿ
ನಜ್ಜುಗುಜ್ಜಾಗಿ ತೆಪ್ಪಗೆ ಒಪ್ಪಿದ ತಪ್ತೆ
ವಿಸರ್ಜನೆಯ ಜಾತ್ರೆಯಂತೆ ಸಂಭ್ರಮಿಸಿ,
ಗಂಟೆಗಟ್ಟಲೆ ನೀರಿಗೆ ಬಿದ್ದು ಉಸಿರುಗಟ್ಟಿ
ಸೆಣೆಸೆಣೆದು ಬಂಡೆಗೆ ಬಡಿಸಿಕೊಂಡು
ಸುಡು ಸೂರ್ಯನ ಕೋಪಕ್ಕೂ ಕುತ್ತಿಗೆಯೊಡ್ಡಿದ ಮೇಲೂ
ನನ್ನಮ್ಮನೆದೆ ಮೇಲೆ ನಗುವ ಸೀರೆ,
ಬರೀ ಬಟ್ಟೆಯಲ್ಲ
ಅಮ್ಮನಾ ಶೀಲವನು, ಖಾಲಿ ತನವನು
ತಂದೆಯಂತೇ ಕಾಯ್ದ ಅಮ್ಮಮ್ಮ
ನನ್ನಮ್ಮನ ಸೀರೆ ಬರೀ ಬಟ್ಟೆಯಲ್ಲ,
ನೋವು ನೀಗಿಸೋ ದಿವ್ಯೌಷಧ
ಕಣ್ಣೀರ ಒರೆಸೋ ಕೋಟಿ ಕೋಮಲೆಯರ
ಕಾರುಣ್ಯ ಕಾವ್ಯ
ಮುಂದೊಂದು ದಿನ ಅವಳದೇ ಕಳೇಬರವ
ಕಟ್ಟುವಾಗ ಕನಲುವ ಕಲ್ಪವಲ್ಲಿ
-ಬಸವರಾಜು ಕ್ಯಾಶವಾರ
No comments:
Post a Comment