Thursday, July 31, 2014

ಅವನಿ ಮತ್ತು ಅವನು



ಘಳಿರು ಘಳಿರಿನ ನಾದ ಕಲ್ಲು ಕರಗುವ ಘಳಿಗೆ
ರೆಪ್ಪೆ ಮುಚ್ಚಿದ ಎಲೆಯ ಸಾಲು ಸಾಲು ತೋರಣ
ಹಿಮಮಣಿಗೆ ಕೊರಳೊಡ್ಡೋ ಕಾತುರ ಅವಳಿಗೆ
ಮುಂಜಾನೆ ಮುತ್ತೈದೆಯಾಗಿ ಗುಳಿಕೆನ್ನೆ ಕೆಂಪಾಗಿ
ಝರಿ-ತೊರೆಗೆ ದನಿಯಾಗಿ ಕಾಯುತ್ತಾಳೆ ಅವನಿ
ಮಬ್ಬುಗತ್ತಲ ಸೀರೆಯಲ್ಲೇ ಮಧುಮಂಚದಲ್ಲಿ
ತಿರುಬೋಕಿ ತಿರುಕನಿಗೆ ಎಂಥಾ ಹೆಣ್ಣುಮಗಳು…?
ಬರುವಾಗ ಮಗುವಂತೆ ಮುದ್ದಾಗಿ ಮುಟ್ಟತ್ತಾನೆ
ನೋಯಿಸದೆ, ತಣ್ಣಗೆ, ತೆಳ್ಳಗೆ ಜಾರುತ್ತಾನೆ
ಇವಳ ಪುಳಕಕ್ಕೇ ಮೊಗ್ಗು ಹೂವಾಗಿ ಬಿರಿಯುವುದು
ಪೋಲಿ ಕೋಳಿಗಳೂ ಹುಂಜಗಳ ನೆನಯುವವು
ಆತುರಗಾರ ಕಾರುತ್ತಾನೆ ಮಬ್ಬುಸೀರೆಯ ಸಿಗಿದು
ಸಹಿಸಿ ಹೆಣೆಯುತ್ತಾಳೆ ನೆರಿಗೆ ಬೆಳಕ ಸೀರೆ
ಸುಖವುಂಡ ಸಿಪ್ಪೆಗೆ ಸೌಜನ್ಯವೂ ಸಿಗದು
ಮಗ್ಗುಲ ಮಳ್ಳ ನೆತ್ತಿಯ ಮೇಲೆ ಮುಳ್ಳಾಗಿ ಸುಡುತ್ತಾನೆ
ದವಡೆಗೆ ದಬ್ಬುತ್ತಾಳೆ ಕೋಪಿಷ್ಟ ಗಂಡನ ಕಾಟ
ಬಿರಿದ ಹೂ ನರಳುವುದು ನೋವ ನೆನೆದು
ಕೋಳಿ ಜೂಗರಿಸುವುದು ಸಾವ ಸನಿಹದಲಿ
ಹಿಮಮಣಿಯ ಕೊರಳರಿದು ಕಣ್ಣೀರಾಯಿತು, ಎಂಥಾ ಅಪಶಕುನ?
ಅವನೇ ಇರುವಾಗ ಕಿತ್ತರೆ ಅರಿಯುವ ದಾರವೇಕೆ? ಧೈರ್ಯಗೆಡಲಿಲ್ಲ
ಮುಟ್ಟಿದರೆ ಉಬ್ಬದ, ತಟ್ಟಿದರೆ ತಗ್ಗದ ತಾಯಿ ಹಬ್ಬುವಳಷ್ಟೇ
ದಬ್ಬಿದರೂ ತಬ್ಬುವ ಸಹಿಷ್ಣು ಸಾಧ್ವಿ
ನರ ಸತ್ತು ಸೆಟೆದವನು ಬಾಗುವನು ಸೋತು
ಕಾಲನ ಸೆಳೆತಕ್ಕೆ ಸಿಕ್ಕಿ ಸಾಯುವುದು ಸಿಟ್ಟು
ಮುದುಕನಾಗುವನು ಯುವಕ ಮುಪ್ಪು ಹೆಪ್ಪಿ
ಬೆಪ್ಪನ ಬಯಕೆಗಳಿಗಿಲ್ಲ ಕೊನೆಯೂ, ಸ್ರವಿಸುವಳು
ಸಾವಿರ ಮಕ್ಕಳ ತಾಯಿಯಲ್ಲಿ ಕನ್ನೆತನ ತೊನೆಯುವುದು
ನರ ನಡುಗೋ ಜೋತುಬಿದ್ದ ತೊಗಲ ತಿರುಬೋಕಿ ಬೆವರುವನು
ಮಂಡಿಯೂರಿ ಮುದ್ದಾಗಿ ಮುಟ್ಟುವನು ಮತ್ತೆ ಮಗುವಿನಂತೆ
ಪುಕಪುಕನೆ ನರಳುವನು ಗೋಧೂಳಿಗೆದರಿ
ಬಿಗಿದಪ್ಪುವಳು ಬಿಡದೆ ಕ್ಷೀಣಿಸುವ ಕ್ಷಣದಲ್ಲೂ
ಬೆಳಕ ಸೀರೆಯು ಮಾಸಿ ಮಬ್ಬು ತಿರುಗುವ ವೇಳೆ ಮುಸ್ಸಂಜೆ ಮುಂಡೆ
ಪೋಲಿ ಕೋಳಿಗಳೀಗ ಪುಕ್ಕಮುದುರಿವೆ
ಅರಳಿನಿಂತ ಹೂಗಳು ಆತ್ಮಹತ್ಯೆಯ ಮಾಡಿಕೊಂಡಿವೆ
ಕತ್ತಲ ಸೆರಗಡಿ ಕಣ್ಣೀರ ಕೋಡಿಯೇ ಹರಿದರು ಕಾಣದಲ್ಲ
ಅವನಿ ಅತ್ತಳು ಅವನಿಗಾಗಿ ನಾಳೆ ಬರುವನೆಂಬ ನೆಂಬಿಕೆಯಲ್ಲಿ
ಕಾಣಲಿಲ್ಲ ಏನೇನೂ ಅವನಿಲ್ಲದ ಇವಳ ಬಾಳಲ್ಲಿ ಪರದೆ ಸರಿದು
ಉಮ್ಮಳಿಸಿದ ದುಃಖವನ್ನ ತೊಡೆದು ತಡವಿತು ತಡ ಗೂಬೆ ಹಾಡು
-ಬಸವರಾಜು ಕ್ಯಾಶವಾರ

No comments:

Post a Comment