Friday, August 15, 2014

ಕೊನೆಗೂ ಸತ್ತ ಸೂರ್ಯ


ಕೊನೆಗೂ ಸತ್ತ ಸೂರ್ಯ, ರಕ್ತ ಕಾರಿಕೊಂಡು
ಸೀದು ಹೋದ ನೆಲಕ್ಕೀಗ ತಣ್ಣನೆಯ ಸೀಮಂತ
ಗೋಧೂಳಿ ಧೂಪ, ಕಲರವದ ಶೋಕ ಗೀತ
ಸೇರಲ್ಲೊಂದು ನೆವ ಸಿಕ್ಕಿದೆ, ಸೀತಾಫಲದೊಳಗಿನ ಬೀಜ
ನುರಿದ ನರಕ್ಕೆ ಬೇಕಿದೆ ನೊರೆ ನೊರೆಯ ನಶೆ
ಅವಳ ಮರೆಸಿ ಅಳ್ಳೆ ತುಂಬಬೇಕಿದೆ ಅಮಲೌಷಧ
ಎಸಳಿನ ಎದೆ ಮೇಲೆ ಎರಡಕ್ಷರ ಬರೆಯಲು ವ್ಯುತ್ಪತ್ಥಿಯ ರಸ ಬೇಕಿದೆ
ಸಣ್ಣತನ, ಈರ್ಷ್ಯೆ, ಕೊಂಕು ಗೈರಾಗಿ “ವೈನಾ”ಗಿ ಜೊತೆಯಾಗಿಸಬೇಕಿದೆ ನಮ್ಮನ್ನ
ಬೀದಿ ನಾಯಿಯ ಮರಿಗಳು ಒಟ್ಟಿಗೆ ಮೊಲೆ ಉಣ್ಣುವಂತೆ
ಹಾಲು, ಹಾಲಾಹಲ, ಅಮಲು ಕುಡಿಯಲ್ಲೆಂದೇ
ಚೆಲ್ಲುವುದೆಲ್ಲಾ ದ್ವೇಷ,ಅಹಂಗಳಷ್ಟೇ…
ಎಳೆ ಹೂವಿಗೆ ಪ್ರಾಯದ ಬಣ್ಣ ಬಳಿದು ಬೀದಿಗೆ ಬಿಟ್ಟು ಬಿಕರಿಗಿಡಲಾಗಿದೆ
ಬಾಡಿದ ಹೂ ಸುಕ್ಕು, ಬಲವಂತಕ್ಕೆ ಬಿರಿದ ಸಂಕಟ ಕಳೆಯೋ ಪವಿತ್ರೆ ಹರಿಯಬೇಕಿದೆ
ಸರಾಗ ಇಳಿಯಲಿ, ಹರಿಯಲಿ, ನುಗ್ಗಲಿ ನೊಂದೆದೆಗಳಿಗೆ
ಲೋಕನಿಂದಿತರು ಲೋಕವನ್ನೇ ಮರೆವಂತೆ…
ತಲೆ ತಿರುಗಿ ತಿರಸ್ಕೃತರು ಪುರಸ್ಕಾರವನ್ನೇ ಧಿಕ್ಕರಿಸಿ ಒದೆಯುವಂತೆ…
ಪಾಪಿಗಳ ಪಾದ ತಾಕಲಿ ಅವರನುಭವದ ಅಮಲಲ್ಲಿ ಸಂಗಮವಾಗಿ
ಏಕಾಂತದ ಏಕೈಕ ಗೆಳೆಯ ಕುರುಡಾಗುವ ಹೊತ್ತಿಗೆ ಇದೆಲ್ಲಾ ಮುಗಿದುಬಿಡಲಿ
ಮತ್ತೆ ಆ ಸೂರ್ಯ ಹುಟ್ಟಿಬರುತ್ತಾನೆ, ಅದೇ ಮುಖವಾಡದ ಬೆಳಕು ಹರಿದು
 -ಬಸವರಾಜು ಕ್ಯಾಶವಾರ







No comments:

Post a Comment