Thursday, August 21, 2014

ಆಗಸದ ಅಂದಕ್ಕೆ...!



ಆಗಸದ ಅಂದಕ್ಕೆ ಒಮ್ಮೊಮ್ಮೆ ನಾಚಿಕೆ
ಕೆಂಪೇರುತ್ತದೊಮ್ಮೆ, ಕಪ್ಪಿಡುತ್ತದೆ ಮತ್ತೊಮ್ಮೆ
ಕಪ್ಪಿಟ್ಟರೆ ಅದು ಉದುರದ ನುಂಗದ ಮಾತಿನ ಸಂಕಟ
ಮುಗಿಲ ನರಗಳು ಚಟ ಚಟ ಸಿಡಿಯುತ್ತವೆ
ನರ ನರಕ್ಕೂ ಉರಿಯ ಬೆಂಕಿ​​
ಕತ್ತಲ ಗೋಡೆಯ ಮೇಲೆ ಸುಡುವ ರಂಗವಲ್ಲಿ
ಭುವಿಯ ಬಾಯ್ತರೆದ ಸಂದುಗಳು ಕಾಣುತ್ತವೆ
ಅಲ್ಲಲ್ಲಿ ನಿಗುರಿನಿಂತ ದಟ್ಟ ಎದೆಗೂದಲ ಆಕರ್ಷಣೆ
ಮೇಘದುಬ್ಬಿದೆದೆ ಬಿಗಿಯುತ್ತದೆ
ಮಾಂಸದುಂಡೆಗಳು ಕರಗುತ್ತವೆ, ನರಳಿ
ಮೂಳೆಗಳು ಮುರಿದು ಚೂರು ಚದುರಿ ಉದುರುತ್ತವೆ
ಮುಟ್ಟಿದರೆ ತಣ್ಣಗೆ ಕೊರೆಯುತ್ತವೆ, ಹೆಪ್ಪುಗಟ್ಟಿದೆ ನೋವು
ನಲುಗುತ್ತಾಳೆ ಅಂತರ ಅದೆಷ್ಟೋ ದೂರವಿರಬಹುದು
ನೋಯಿಸಲು ಸನಿಹವೇ ಬೇಕಿಲ್ಲ
ಅಳುತ್ತಾಳೆ, ಗೋಳಿಡುತ್ತಾಳೆ, ಗಡ ಗಡ ನಡುಗುತ್ತಾಳೆ
ರಾಕ್ಷಸ ಭುವಿಯ ಅಣುವಣಿಗೂ ಆಹ್ಲಾದದ ಪರಮಸುಖ
ಎಂಥಾ ಕಟುಕ?
ಸಣ್ಣ ಸುಳಿವೂ ಉಳಿಯಂದಂತೆ ಉರಿದು ಮುಕ್ಕಿಬಿಟ್ಟ
ಎಲ್ಲಾ ಮುಗಿದೇ ಹೋಯ್ತು ಪಾಪಿಷ್ಟನಿಗೆ ಸತಿಯಾಗಲೇಬೇಕು
ಆರ್ಭಟ ಕಮ್ಮಿಯಾಗುತ್ತೆ, ಬಿಳಿ ಬಾವುಟ ಹಾರುತ್ತೆ
ಕಟುಕನ ಕ್ರೌರ್ಯಕ್ಕೂ ಕೊನೆಬೀಳುತ್ತೆ
ಆಗಸದ ಅಂದ ಇನ್ನೂ ಉಳಿದಿದೆ
ನರಗಳೇ ನದಿಗಳಾಗಿವೆ, ತೊರೆಗಳಾಗಿವೆ
ದಟ್ಟ ಎದೆಗೂದಲು ನೆಂದು ತೊಪ್ಪೆಯಾಗಿವೆ
ಆಗಸದ ಅಂದಕ್ಕೆ ಒಮ್ಮೊಮ್ಮೆ ನಾಚಿಕೆ ಮಗದೊಮ್ಮೆ ನೋವು
ಎಲ್ಲವನು ಕಂಡ ಮರದೆಲೆಯ ಕಣ್ಣಿಂದ ಹನಿ ಇನ್ನೂ ಜಿನುಗುತ್ತಿದೆ
 -ಬಸವರಾಜು ಕ್ಯಾಶವಾರ

No comments:

Post a Comment