Friday, August 15, 2014

"ಬೋ"ಳಿ ಮಗನಲ್ಲ...!

ಬೈದಿದ್ದರೆಲ್ಲರು "ಬೋಳಿ ಮಗ..."
ಅವನಾಗಿರಲಿಲ್ಲ, ಆ ಬಗ್ಗೆ  ಖಾತರಿಯಿತ್ತು.
ಅವ್ವನ ಮೇಲೆ ಅನುಮಾನವಿತ್ತು
ಚಿಲ್ಲರೆ ಹೆಂಗಸು , ಗಂಡ ಸತ್ತ. ವರ್ಷಕ್ಕೆ  ಮತ್ತೆ ಹಚ್ಚಿದಳು ಮದರಂಗಿ
ಕಿತ್ತು ಬಿಸಾಕಿದ್ದ ವಾತ್ಸಲ್ಯ. ನಾಟಕದ ಅಂಗಿ
ಅವನಯ್ಯನ್ ಯಾಕನ್ನಬೇಕು ಅಪ್ಪ?
ಅವಳ ತೆಕ್ಕೆ ಗೆಲ್ಲಲು ವಿಷ ನಗು ಕಾರುತ್ತಿದ್ದವನ
ಇದೆಲ್ಲವನ್ನೂ ಕಂಡು ಹದಿನಾಲ್ಕನೇ ವಯಸ್ಸಿಗೇ ಸೂಳೆಕೇರಿ ಸೇರಿಬಿಟ್ಟ
ನಿಜ ಪ್ರೀತಿ ಹುಡುಕಲಿರಬಹುದು
ನೀತಿಗೆಟ್ಟ ಚಟಗಳ ರಮಿಸಿದ
ಮನುಷ್ಯನ ಸಣ್ಣತನಕ್ಕಿಂತ ಪಾಪದ ಪರಮಾನ್ನ ರುಚಿಸಿತ್ತು
ಪುಕ್ಕಲು ಪುಣ್ಯಕ್ಕಿಂತ ಸಹ್ಯ ಅನಿಸಿತ್ತು ನಿಷ್ಠುರ ಪಾಪ
ಭಂಗಿ ಸೇದಿದ, ಹೆಂಡ ಹೀರಿದ
ತಿರಬೋಕಿಯಂತೆ ತಿರುಗಾಡಿದ
ತಿರಸ್ಕೃತ ಅಂದುಕೊಂಡ
ಮಡಿವಂತಿಕೆಯ ಷಂಡತನದ ಪುಣ್ಯ ಇವನತ್ತಿರ ಸುಳಿಯಲಿಲ್ಲ
ಪಾಪಗಳೆಂಬ ಪತಿವ್ರತೆಯರು ಬಿಗಿದಬ್ಬಿಕೊಂಡರು
ಬಯಸಿದ್ದ ವಧಾಸ್ಥಾನವಾಗಲಿ ಹಲ್ಲಿಲ್ಲದ ವಸಡು
ಕಲೆಗಟ್ಟಿದ ನೆತ್ತರ ಬಿರುಸು ತುಟಿಗಳ ಚುಂಬಿಸಿ ಕಾವ್ಯ ಕಟ್ಟಿದ್ದ
ಅಷ್ಟೊತ್ತಿಗೆ ಅಪ್ಪನಲ್ಲದ ಅಪ್ಪ. ಬೋಧಿ ವೃಕ್ಷದತ್ತ ಅಟ್ಟಿದ್ದ
ಬೋಳಿಮಗ, ಕರುಣಾಳು ಬುದ್ಧನ ಗಾಳಿ ಸೋಂಕಿ ಬಿಕ್ಕುವಾದರೂ ಆಗಬಹುದಿತ್ತು
ಅವನು ಅಸಲಿಗೆ ಇಂಡಿಯಾಕ್ಕೆ ಬರಲಿಲ್ಲಿ.
ಬುದ್ಧನೂ ಆಗಲಿಲ್ಲ, ಬೋದಿಲೈರ್ ಆದ
ಪಾಪದ ಪ್ರೇಮ ಪರಾಗಕ್ಕೆ ಹೂ ಬೀಜವಾಯ್ತು
ಮತ್ತೆ ಮೊಳೆಕೆಯೊಡೆದು ಹೂ ಬಿಟ್ಟಾಗಲೇ ಇವನನ್ನ ಮಡಿವಂತಿಕೆ ಜನ
ಅವರ ಮಂತ್ರಾರ್ಚಿತ ಪುನೀತ ನಾಲಿಗೆಯಿಂದ ಅಂದಿದ್ದು ಬೋಳಿಮಗ...
ಅಂದ್ಹಾಗೆ ಇವನು ಬೋಧಿ ವೃಕ್ಷದ ಕಡೆ ಬರುವ ವೇಳೆಗೆ ಗಧಾದರ ಸಣ್ಣವನಿದ್ದ
ಮೋಹನ ಹುಟ್ಟಿಯೇ ಇರಲಿಲ್ಲ
ವಿವೇಕನಾಗಮನದ ಸಣ್ಣ ಸುಳಿವೂ ಇರಲಿಲ್ಲ
ಜಾತಿಯ, ಧರ್ಮದ, ವರ್ಣದ ಹೇಲು ಗುಂಡಿ ತುಂಬುತ್ತಿತ್ತು
ಅಂತೂ ಪಾಪದ ಪದ್ಯ  ಓದಿ ಬೆಚ್ಚಿಬಿದ್ದ. ಮುಂಡೆ ಗಂಡರು  "ಬೋ"ನನ್ನ ಅಂದಿದ್ದರು ಬೋಳಿಮಗ

No comments:

Post a Comment