ಕೆಚ್ಚಿಗೆ ನೆಚ್ಚಗೆ ಮಚ್ಚಿನೇಟು
ಕೊಟ್ಟು
ಜುಟ್ಟು ಹಿಡಿದು ಮೆಟ್ಟು ಹೊಲೆದು
ಬಡಿಬಡಿದು ಮಟ್ಟ ಮಾಡಿ
ಮೂಲೆಮೂಲೆಗೆ ಮೊಳೆಯ ಜಡಿದು
ಔಡಲದ ಔಷಧವ ಎದೆಗೆಲ್ಲ ಸವರಿ
ಕೊನೆಗೊಂದು ಕೈಮುಗಿದು ಕಾಲ ಮುಂದಿಡುವ
ನಮ್ಮೂರ ಚಮ್ಮಾರ, ಗೂನುಬೆನ್ನದೇವರು
ನೊಸಲು ನುಂಗಿ ನಗುವ ಪಟ್ಟೆ
ರಕ್ತ ಅಂಟಿದಾ ಕೈ, ಮೈಮುಚ್ಚಿದ
ಕಾಷಾಯ
ಸುಲಿವ ಬೆರಳು, ಸೇರಿಸೋ ಮನಸು
ಕಳೇಬರಕೂ ಕಸೂತಿ ಮೋಕ್ಷ
ಪಾದದಾ ಅಪ್ಪುಗೆ ಪುಣ್ಯವೋ?ಪಾಪವೋ?
ರಕ್ಷಣೆಯ ಕಾಯಕವಂತೂ ತಾಯ್ತನವೇ
ಸರಿ
ಕಾಲೆಂಬ ಕೂಸುಗಳ ಕಾಯೋ ಅಮ್ಮನನೇ
ಮಾಡಿಕೊಡೋ
ನಮ್ಮೂರ ಚಮ್ಮಾರ, ಗೂನುಬೆನ್ನದೇವರು
ಕಸಕ್ಕನೇ ಕಡಿವ ಕಾಡುಮುಳ್ಳಿನ
ಮೊನಚು
ತಾಕಿದಂತಾದರೂ ತಾನುಣ್ಣುವ ತಾಳ್ಮೆ
ಎಲ್ಲೇ ಇಟ್ಟರೂ ಬಿಟ್ಟು ಹೋಗದ
ಬಾಂಧವ್ಯ
ತುಳಿದಷ್ಟೂ ತಡೆದು ತಡವುವ ತ್ಯಾಗ
ಕಾಲ ಮೆಟ್ಟೇ ಕೆತ್ತುವ ಕಲೆಗಾರ
ನಮ್ಮೂರ ಚಮ್ಮಾರ, ಗೂನುಬೆನ್ನದೇವರು
ಮೆಟ್ಟಾಗಬೇಕಲ್ಲ, ಮೆತ್ತಗೆ ಮೊಳೆ
ಹೊಡೆಸಿಕೊಂಡು
ದ್ವೇಷ-ಅಸೂಹೆಗಳ ಚರ್ಮ ಸುಲಿಸಿಕೊಂಡು
ಮೃದು ಸ್ಪರ್ಶದ ಔಡಲ ಎದೆಗಂಟಿಸಿಕೊಂಡು
ವಿಷಕಾರುವ ಜೊತೆಗಾರರ ಕಾಲು ಕಾಯುವ
ಕಾಯಕ್ಕಾಗಿ
ಅವರೆದೆಯಲ್ಲೂ ಅಹಿಂಸೆಯ ಅವರೆ
ಹೂ ಬಿರಿವಂತೆ
ಗೊಂಚಲು ಗೊಂಚಲು ಕಾಯಿಯ ಸೊಗಡು
ಊರೆಲ್ಲಾ ಸೋಕುವಂತೆ
ಕಾರುವ ಊರುಗಳೆಲ್ಲ ಕಾರುಣ್ಯದ
ಕಾಯಕವ ಕಣ್ಣಿಗೊತ್ತಿಕೊಳ್ಳುವಂತೆ
ತುಳಿವ ಮುನ್ನ ತಳದ ತಪಸ್ಸಿಗೆ
ತಡವಿ ತಥಾಸ್ತು ಅನ್ನಲೇಬೇಕು
ಅಡಿ ಹೊಸಕುವ ನಾವು ನೆತ್ತಿಯ ಮೇಲ್ಲೊಂದು
ದಿನ ಹೊರಲೂಬೇಕು
ಭಾರ ಹೊತ್ತ ದೇವರೀಗ ಗೂನುಬೆನ್ನಿನವನ್ನಾಗಿದ್ದಾನೆ
ಗೂನುಬೆನ್ನದೇವರಿಗೆ ಭಾನೂ ಭಾರ,
ನಾವೂ ಭಾರ
-ಬಸವರಾಜು ಕ್ಯಾಶವಾರ
No comments:
Post a Comment