ಗೊಡ್ಡು ಬಿದ್ದ
ಬೆರಳು, ಬಂಜೆಯಾದ ಪೆನ್ನು
ಕೆಣಕಿದರು
ನಿಗುರದ ನಿಸ್ತೇಜ ಮೆದುಳು
ನೆತ್ತರುಂಡು
ಉಗಿಯೋ ಬರಿಯ ಹೃದಯ
ಅಪ್ಸರೆಯೇ
ಅಪ್ಪಿದರೂ ಅರಿವಿರದ ತನುವು
ನಿರ್ಲಿಪ್ತ
ಪರಿವ್ರಾಜಕ ಮನಸು
ಕಾವ್ಯದ ಕೂಸಿಲ್ಲಿ
ಕೊನರುತ್ತಿಲ್ಲ
ಕಂಡಕಂಡ ಕಲ್ಪನೆಗೆ
ಕೈಮುಗಿದು
ಕಾಲಿಗೆರಗಿ
ದೀರ್ಘದಂಡ ಬಿದ್ದು
ಉಪವಾಸ ಉಪಾಸನೆಗೂ
ಉದರವಿಲ್ಲ
ನಾಟಿ, ನೈವೇದ್ಯಗಳ
ನೆಕ್ಕಿ
ಸ್ವಾಮಿ,ಬಾಬಾಗಳ
ಬೂದಿ ಮುಕ್ಕಿ
ರಾತ್ರಿ ಪೂಜೆಗಳಿಗೆ
ರತಿಯಾದರೂ
ಭಾವ ಭ್ರೂಣವೇ
ಇಲ್ಲಿ ಕಟ್ಟುತ್ತಿಲ್ಲ
ಕಂದು ಹಾಕಿದರೂ
ಸಾಕೆನ್ನುವ ಕರುಳು
ಕನಲಿದರು
ಕನಸಿದರು ಕಾವ್ಯ ಹುಟ್ಟುತ್ತಿಲ್ಲ
ಅಕ್ಷರದ ಅಂಡಕ್ಕೆ
ಕಾವು ಕೊಡುವ ಕಾಗೆಯ ಕಾಗುಣಿತ ಕಾಣುತ್ತಿಲ್ಲ
ರೇತಸ್ಸಿನ
ರಗಳೆ, ಗೇಯತೆಯ ಒಲವು ಒಲಿಯುತ್ತಿಲ್ಲ
ಪ್ರಾಸದ ಪ್ರಾಯವೂ
ಪಾಪ ಹೆಪ್ಪುಗಟ್ಟಿದೆ ಇಲ್ಲಿ
ಸರೀಕರ ಸಾಲು
ಶಿಶುಗಳ ಮುಟ್ಟುವಂತಿಲ್ಲ
ಬಂಜೆ ಬರವಣಿಗೆ
ಬಚ್ಚಲಲಿ ಬಿಕ್ಕುವುದಷ್ಟೇ
ಆರ್ಭಟಿಸಿ
ಅಕ್ಷರವೂ ಮೆದುಳಲ್ಲೊಂದು ಹುಳ ಮೊಳೆತು
ಬುಳಬುಳನೆ
ಎದೆಗಿಳಿದು ಪುಳಕಗೊಂಡು
ಭಾವಭ್ರೂಣ
ಕಟ್ಟುವುದೆಂದೋ?
ಹೆಣ್ತನದ
ಕಾವ್ಯಕ್ಕೆ ಕರುಳು ಕೊನರಿ
ಮಾತೆಯ ಪಟ್ಟಕ್ಕೇರಿ
ಮೋಕ್ಷ ದೊರೆವುದು ಎಂದೋ?
ಅಕ್ಕರೆಯ
ಅಕ್ಷರದ ಅನುಗ್ರಹವಾದ ದಿನ
ಬರವಣಿಗೆಯ
ಬಸಿರು ಬೆಳದ ಬೆಳೆಗೆ
ಅಕ್ಷರವೇ
ಅಂದದ ಅಕಾರಕ್ಕೆ ತಿರುಗಿ
ಒಂಬತ್ತು
ತಿಂಗಳು ತುಂಬುವ ಗಳಿಗೆ
ತಪ್ಪದೇ ಸೀಮಂತದ
ಸಿಹಿಯ ಸಹಿ ಹಾಕುವೆ...
-ಬಸವರಾಜು
ಕ್ಯಾಶವಾರ
No comments:
Post a Comment