ಬಿಕರಿಗಿಟ್ಟಿದ್ದಾಳೆ ಪ್ರೀತಿಗಿತ್ತಿ;
ರೀತಿ ಬೇರೆ
ಅನುವಾಗಿ ಅರಳುತ್ತಾಳೆ ಅನಿಶ್ಚಿತ
ಬಾಡಿದುಟಿಗಳ ದಳಕ್ಕೆ ಬರೀ ಬಣ್ಣ
ಪರ್ಯಾಯಗಳೊಂದಿಗಿನ ಪೈಪೋಟಿ
ತೊಗಲ ಸರಕಿಗೆ ತೆಳು ತೊಡುಗೆ
ಕಾಂತಿ ಸತ್ತ ಕಣ್ಣು ಕಾಳು,ಕಾಂಚಾಣದತ್ತ
ನಲುಗಿ ನರಳಿದ ನಿನ್ನೆಗಳ ನೆನಪಿಲ್ಲ
ಅರಿದು ಬೆರೆಯುವ ಹಾಳೆ
ಅನುಭವವಷ್ಟೇ,ಅನುಭೂತಿಯಲ್ಲ
ಅತ್ತಾಗ ತುತ್ತಾಗಲಿಲ್ಲ, ತೊತ್ತಾಗಬೇಕಾಯ್ತು
ಹಸಿದವನಿಗುಣ್ಣಿಸುವ ಅಮ್ಮನ ಮೇಲೆಂಥಾ
ಕ್ರೌರ್ಯ?
ಮೀಸೆಯ ಮರಿಗೆ ಮೆರೆಯುವುದಷ್ಟೇ
ಮುಖ್ಯ
ಅಳ್ಳೆ ಅಳುವಿನ ಅಲೆಗೆ ದಡವಿಲ್ಲ,
ತಡೆಯಿಲ್ಲ
ತೂಬಿಗೆ ತುಂಬಬೇಕಷ್ಟೇ;ಮಿತಿಯಿರದ
ಮಿಥ್ಯೆ
ಅಂಗಲಾಚಿದಾಗ ಇಲ್ಲದ ಚುಚ್ಚು ಮಾತಿನ
ಮುಳ್ಳುಹಂದಿ
ಬಲಿಯ ಬೀದಿಬದಿಗೆ ಬರಸೆಳೆದ ಬೇವರ್ಸಿ
ಬಾಹು
ಸುಖ ಸಿಹಿಗೆ ಮುತ್ತುವ ಇರುವೆ,
ಸಂಕಟಕೆ ಏಕಾಂತ ಸಾವು
ವಿಸರ್ಜಿಸುವ ವ್ಯಾಧಿಗೆ ವಿರೇಚಕ
ವಿಷವೂ ಸಿಗಲಿಲ್ಲವಲ್ಲ
ನೀಚನ ಹುಸಿ ನಿಷ್ಠೆಯ ಮುಂದೆ ಪ್ರೇಮಗಿತ್ತಿ
ಪತಿವ್ರತೆ
ಕಸಿವು ಕಸಿವ ಕರಿನಾಗರ ಕಾರ್ಕೋಟಕ
ಕೂಟದ ಕಡಿತ
ವಿಷವನ್ನುಂಡು ನೀಲಿಗಟ್ಟೇ ನಗುವ
ನೀಲಿಯವಳು ಪ್ರೇಮಗಿತ್ತಿ
-ಬಸವರಾಜು ಕ್ಯಾಶವಾರ
No comments:
Post a Comment