ಇರುಳು ಅರಳಿ ಕತ್ತಲಡರಿ
ಬೆಳಕು ಸತ್ತಿದೆ
ಹರಡುತಿದೆ ಹುಗಿದಿಟ್ಟ ಹಗಲ
ಹಳಸುಗಾಳಿ
ಮೆಟ್ಟಿಲುದುರಿದ ಬಾವಿಗೆ
ಮುಚ್ಚಳ ಹಾಕಲ್ಲ
ಮಜ್ಜೆ ಹೀರಿದ ಖಾಲಿ ಕೂಪ;
ಕಂಕಾಲ ಕುಣಿತ
ಹಬ್ಬುತಿದೆ ಮಬ್ಬು ಕರಿನಾಗರ
ಮರಿಗಳ ಕೂಟ
ತೊಟ್ಟಿನ ಕುಣಿಕೆಯಲ್ಲಿ ಜೋತುಬಿದ್ದ ಎಲೆಗಳು
ಕಾಂಡಗಳು ಕಂತಿ ಕದಡಿದ ಕರಿ
ಭ್ರೂಣದ ತುಣುಕುಗಳು
ಬಹುಬೇಗ ಬಗೆಬಗೆದು ನೆಲ
ನುಂಗಿ ಬಿಗಿಬೇರು
ಕಪ್ಪಿಟ್ಟ ಕಿರಣಗಳ ಕಳೇಬರವೇ
ಮರಕೆ ಕಸುವು
ಹಗಲು ಅಗಿದ; ಅಳ್ಳೆಗಿಳಿದ ಬಿಳಲ ಗಳದ ಮೇಲೆ ಬಿಳಿಗುಮ್ಮ
ನಿಶಾ ನಿರ್ದಯಕ್ಕೆ
ಘೂಕಾಪತಾಕನ ಎದೆಕೆಚ್ಚಿನ ನೋಟ
ಮೆದುಳುಗೇರುತ್ತಿದೆ ಹಗಲ
ತೊಗಲ ಸಿಗಿದ ಗಮಲಿನ ಅಮಲು
ಕಣ್ಣಾಯಿಸಿದಷ್ಟೂ ದೂರ
ಬೆಳಕಿನ ಹಳಸು ಮಾಂಸದ ತುಣುಕುಗಳು
ಅಲ್ಲಲ್ಲಿ ಕಚ್ಚಿದ, ಬಿಗಿದ್ಹಿಡಿದ ಉಗುರು ಗುರುತು; ಕ್ರೂರ ಶಾಸನ
ಮೂರನೇ ಜಾವಕ್ಕೆ ಮುಟ್ಟಾಗದ
ಸಾಯೋ ಮುಪ್ಪು ಮಬ್ಬು
ನೀರವ ನಿಶೆಯಲ್ಲಿ ಕಿಂಚಿತ್ತು
ಧೈರ್ಯ ಕತ್ತಲ ಕುತ್ತಿಗೆಯ ಕಡಲು
ಸಾಗರದ ಅಲೆಗಳ ಮೊಲೆಯಿಂದ
ಚಿಮ್ಮುತಿಹ ನೊರೆ ಹಾಲಿಗೂ ಗೊತ್ತು
ಅರಿವಿದೆ ಇಂಚಿಂಚು ಅಂಚಂಚು
ಎಲ್ಲಗಳ ಎಲ್ಲೆಗಳ ತಾಕುತಿಹ ತಂಗಾಳಿಗೂ
ಗುಟುಕರಿಸುತಿರುವ ಗಿಡ ಗಂಟೆಯ
ನರನಾಡಿಗೂ ಗೊತ್ತು ನಿಜ
ಪುನರಪಿ ಜನನಂ, ಪುನರಪಿ ಮರಣಂ ಪುನರಪಿ ಜನನೀ ಜಠರೇ ಶಯನಂ
ಕತ್ತಲು ಕಮರಿ ಮುಗಿಲ
ಗಾಂಧಾರಿಗೆ ನವಮಾಸದ ಸೀಮಂತ
ನೂರಲ್ಲ, ಸಹಸ್ರವಲ್ಲ, ಕೋಟ್ಯಾನುಕೋಟಿ ಬೆಳಕಿನೆಳೆಗಳ ಚಿಗುರು
ನೂರ್ಮಡಿಯ ವೇಗದಲ್ಲಿ ಹೇಂಟೆ
ತಾಕಿದ ಬಳ್ಳಿ, ಹುಂಜದ ಗಂಟಲಲಿ
ಡಂಗುರ
ಕತ್ತಲೂ ಅಷ್ಟೇ ಕಷ್ಟವೂ
ಅಷ್ಟೇ ಇಷ್ಟಿಷ್ಟೇ ಅಷ್ಟಷ್ಟೇ ಬಂದು ಹೋಗುವುದಷ್ಟೇ
-ಬಸವರಾಜು ಕ್ಯಾಶವಾರ
No comments:
Post a Comment