ನೆನಪಾಯ್ತು, ಬಿಟ್ಟೆ ಕಣ್ಣು
ಇಳಿಬಿದ್ದ ನನದೇ ಕಳೇಬರದತ್ತ
ಗಾಳಿಗುಂಟ ಸುತ್ತುತ್ತಿತ್ತು ಎದೆರೋಮ
ಉನ್ಮತ್ತ ಮಿಂಚು ಫಳ ಫಳ
ಅರೆ, ರಕ್ತಬುಗ್ಗೆ ಬುಳ ಬುಳ
ಕೇಳಿಸ್ತು,”
ರಾಮ್ ನಾಮ್ ಸತ್ಯ ಹೈ”
ಬದಲಾಯ್ತು
ಸರ್ರನೆ… ಜರ್ರನೆ…ನಾಡಿ, ನೆತ್ತರು
ಕಟ್ಟಿಕೊಳ್ತು ಭಯದ ಭ್ರೂಣ
ಕೋಶ ಕಲ್ಲೋಲದಲ್ಲೂ ಬೆರೆತ ಸಂಕಟದ ಸಾರಾಯಿ
ಹಗೆ ಪಾಯಾಸ ಬಗೆಯಿತು ಹೊಕ್ಕಳು
ಕಹಳೆಯೂದಿಯಾಗಿತ್ತು ಕಣ ಗಣದ ಕಾಳಗ
ಒಬ್ಬರನ್ನೊಬ್ಬರು ಗಬ್ಬಗಬ್ಬನೆ ತಿಂದು
ಬಿಸಿಯಾಯ್ತು ತಲೆ ತಳಮಳದ ಹೊಗೆಯಾಡಿ
ಕೊಳೆತಾತ್ಮ ಸ್ರಾವದ ಪಾಪ ತಾಕಿ
ಮೆದುಳು ಕದಡ್ಹೋಯ್ತು
ಹಗಲು, ರಾತ್ರಿಗಳ ಕಿಚಡಿ
ಮಣಮಣಗುಟ್ಟ ಮಸ್ತಿಷ್ಕ
ಸ್ವಾದಿಷ್ಟ ಸಾವು
ಕಿಂಕರರು ಬಿಗಿದರುರುಳು
“ಆದ್ರೆ, ಮತ್ತೆ ಸಿಗೋಣ”, ಕುತ್ತಿಗೆಯ ನರಳು
ಕಾಣೋಣಾಂತ ಕೊನೆಗೂ ಕಣ್ಣೀರಿಟ್ಟು ಹಿಂಗಿದವು ಕಣ್ಣು
ಕಾದು... ಕಾದು… ತಳ ತಣ್ಣಗಾದಾಗ
ಯಾರೋ ತುಳಸಿ ಬಿಟ್ಟು ಹೆಪ್ಪಾಕಿದ್ರು
ರಕ್ತಕ್ಷೀರ ಕೆಂಗರಣೆಗಳ ಮೊಸರಾಯ್ತು
ಅದೂ ಕದಡಿ ಬೆಣ್ಣೆಯಾಯ್ತು
ಬೆಣ್ಣೆ ಕಾದು ಕಾದು ಆತ್ಮದ ಆವಿಯಾಯ್ತು
-ಬಸವರಾಜು ಕ್ಯಾಶವಾರ
-ಬಸವರಾಜು ಕ್ಯಾಶವಾರ
No comments:
Post a Comment