Friday, July 4, 2014

ನಾನು ಕೇಳಲಿಲ್ಲ



ಮಬ್ಬುಕವಿದ ಗಳಿಗೆ
ಬಾಗಿಲು ಬಡಿದ ಸದ್ದಾಯ್ತು
ಎಂದೋ ಮುಚ್ಚಿತ್ತು
ಕಿಲುಬಿಡಿದಿತ್ತು ಚಿಲಕ
ತೆಗೆದೆ ತಪಸ್ಸು ಮಾಡಿ
ಒಬ್ಬರಲ್ಲ, ಮೂವರಿದ್ದರು
ಅವನ್ಯಾರೋ ಭೈರಾಗಿ, ಕೊರಳಲ್ಲಿ ಹಾವಿತ್ತು
ಇನ್ನೊಬ್ಬ ಸ್ಪುರದ್ರೂಪಿ ಹೆಣ್ಣಿಗ
ಮತ್ತೊಬ್ಬನಿಗೋ ತಲೆ ಮೂರು ಮತ್ತೊಂದು
ತಗ್ಗಿಸಿ ನಿಂತಿದ್ದರು, ಮುಖಕ್ಕಂಟಿತ್ತು ಮ್ಲಾನತೆ
ಯಾಕೋ ಪಿಚ್ ಅನಿಸಿಬಿಡ್ತು
ನಾನೇನೂ ಕೇಳಲಿಲ್ಲ, ಆದ್ರೂ ತಲೆ ತಗ್ಗಿಸಿದ್ದರು
ಅನ್ನಕ್ಕಾಗಿ ಅತ್ತು ಅತ್ತು
ಆತ್ಮಹತ್ಯೆ ಮಾಡಿಕೊಂಡ ಅಸಹಾಯಕ ಹುಡುಗನ ಬಗ್ಗೆ ನಾನು ಕೇಳಲಿಲ್ಲ
ಕಸಿವಿದ್ದಾಗ ಮಾರಿಕೊಂಡು ಮೈ
ಇದೀಗ ವೀಧಿಯಲ್ಲೇ ವಿಷ ಕುಡಿದು ಸತ್ತ ಸೂಳೆ ಸೋದರಿ ಬಗ್ಗೆ ಕೇಳಲಿಲ್ಲ
ಇದೊಬ್ಬ ಮಗನನ್ನ ಸಮರ ಸಿಗಿದು ನುಂಗಿದಾಗ
ನೆನೆನೆದು ನದಿಗ್ಹಾರಿ ಪ್ರಾಣ ಬಿಟ್ಟ ಮುದುಕಿ ಬಗ್ಗೆ ನಾ ಕೇಳಲಿಲ್ಲ
ಈಜಿಪ್ಟ್, ಇರಾಕ್, ಅಫ್ಘಾನ್ನಲ್ಲಿ ಬೆಂದು
ಬೆವತು ಮಲೆತು ನಾರೋ ಕಾಲದ ಕಥೆ ಮನುಕುಲದ ವ್ಯಥೆಯ ಬಗ್ಗೆ ವಿವರಿಸಲೇ ಇಲ್ಲ
ನಿಜ ಹೇಳಿ, ನಿಮ್ಮ ಬಗ್ಗೆ, ನನ್ನ ಬಗ್ಗೆ
ನಿಖಲ ಸೃಷ್ಟಿಯೊಳಗಿನ ನೀಚತನದ ಬಗ್ಗೆ
ನೀರವ ಸುಂದರ ಹೃದಯ ಪಾತ್ರೆ ತುಂಬಿದ ಹಲಾಹಲದ ಬಗ್ಗೆ ನಿಜ ಹೇಳಿ ಅಂತ ಕೇಳಿದೆನಾ?
ನಿಂದಿಸಿದೆನಾ? ನಿರ್ಬಂಧಿಸಿದೆನಾ?
ನನಗೆ ಗೊತ್ತು, ನನಗೆ ಗೊತ್ತು, ಸರಪಳಿಯೊಳಗಿನ ನಿತ್ರಾಣ ಸತ್ಯ
ಆ ಆರು ಕೆನೆಗಳಿಂದ ಜಾರುತ್ತಿದ್ದ ಕಣ್ಣೀರು ದೀಪಕಾಂತಿಯಲ್ಲಿ ಪ್ರತಿಫಲಿಸಿತು
ನೋಡಿ ನೋವಾಯ್ತು, ಎದ್ಹೋಗಿ, ಕಣ್ನೀರೊರೆಸಿ, ಆಲಂಗಿಸಿ, ಸಾಂತ್ವಾನ ಹೇಳಿದೆ
ಹೋಗಿ ಬನ್ನಿ ಅಂದೆ ನಾನೇನೂ ಕೇಳಲ್ಲ
ಬಿಟ್ಟು ಬಂದೆ ಮುಗಿಲಬೀದಿಯ ಕೊನೆವರೆಗೂ
ನನಗೆ ಗೊತ್ತು, ನನಗೆ ಗೊತ್ತು
ಮಗನೇ ತಿರುಗಿಬಿದ್ದಾಗ
ಪಾಪ, ಹೆತ್ತ ಹೃದಯ ಏನು ಮಾಡುತ್ತೆ?
*ತೆಲುಗಿನ ಶ್ರೇಷ್ಠ ಸಾಹಿತಿ ದೇವರಕೊಂಡ ಬಾಲಗಂಗಾಧರ ತಿಲಕರ “ನಿನ್ನ ರಾತ್ರಿ” ಅನ್ನೋ ಕವನದ ಅತ್ಯಂತ ಕೆಟ್ಟ ಭಾವಾಂತರ. ಇದ್ರಲ್ಲಿ ಒಂದಷ್ಟು ನಂದೆಲ್ಲಿ ಇಡ್ಲಿ ಅಂತ್ಲೇ ಇಟ್ಟಿದ್ದೀನಿ.
-(ಕನ್ನಡಕ್ಕೆ) ಬಸವರಾಜು ಕ್ಯಾಶವಾರ 

No comments:

Post a Comment