Thursday, January 8, 2015

ನನ್ನಪ್ಪ

ಕುಲುಮೆಯ ಆರದ ಕಾವಿನ ನನ್ನಪ್ಪ ಒಮ್ಮೊಮ್ಮೆ
ಪಿಕಾಸಿ, ಗಡಾರಿ, ಫಳಫಳ ನಗುವ ಮಚ್ಚು
ಕಾದೂ ಕಾದೂ ಕರಗಿಬಿಡುವ ಬೆಣ್ಣೆ ಕಬ್ಬಿಣ
ಚೂಪು ನೇಗಿಲು ಮೂಗು
ರೆಟ್ಟೆಯನ್ನೂ ಮಾತಾಡಿಸುವ ಮಿಣಿ ಮೀಸೆ
ಕಣ್ಣು ಒಳಗೆ ಸುಡುವ,ಹೊರಗೆ ಕೊತಕೊತ ಕುದಿವ
ನಿಗಿನಿಗಿಯ ಆಲೆಮನೆಯ ಒಲೆ
ಮುರಿವ, ಬಗೆವ, ಅಗಿವ
ಸಿಗದಿದ್ದರೆ ಬೊಗಸೆಯಲ್ಲೇ ಬಸಿದು ಬದುಕೋ ಬಾಯಿ
ಬಣ್ಣ ನಾಟಕವಾಡುವ ಬಿಳಿಯಲ್ಲ,ಈ ನೆಲದ ನಿಜ
ಗಾಣದ ಬದುಕಿನ ಕಬ್ಬಿಗ
ಇವನದ್ದು ವರ್ಷಕ್ಕೆ ಎರಡೇ ಕಾವ್ಯ
ಮುಂಗಾರಿಗೊಂದು, ಹಿಂಗಾರಿಗೊಂದು
ಹೊಟ್ಟೆ ತಣ್ಣಗಾಗಿಸೋ ಕಬ್ಬಿನಂತಹ ಕಬ್ಬ
ಮನಸು ಬಣ್ಣದಂತೆಯೇ ಕರಿಜಾಲಿ ಕೊರಡು
ತಡವಿದರೆ ತಳಕ್ಕೀಳಿವ ಉದ್ದ ಮುಳ್ಳು
ಕೆತ್ತಿದರೆ ಕಚಗುಳಿ ಇಡುವ ಬುಗುರಿ
ಅಲುವೆಯರಸ ಬಾಚಣಿಗೆ ಮುಟ್ಟಲಿಲ್ಲ
ಬಿಗಿದು ಅಲುವೆ ಬಾಚುತ್ತಿದ್ದ ಅಮ್ಮಮ್ಮನ ತಲೆ
ಕುಚ್ಚು ಕಟ್ಟಿ ಕಾಳಿನ ಬಿಲ್ಲೆ ಜೋಡಿಸಿ ಜಡೆ ಹೆಣೆಯುತ್ತಿದ್ದ
ತಾಯ್ಮಗನ ಪ್ರೀತಿಗೆ ಕಾಳು ಕೊನರಿ
ತೆನೆ ಬಾಣಂತನಕ್ಕೂ ಮುನ್ನವೇ ಹಾಲುಣಿಸುತ್ತಿತ್ತು
ಅಪ್ಪ ಅದೇ ಕುಲುಮೆಯ ಕೆಂಡದಂತೆ ಉರಿಯುತ್ತಾನೆ
ಮತ್ತೆ ಕೂರಿಗೆಯಾಗಲು, ಕುಡಗೋಲಾಗಲು

Monday, December 22, 2014

ಖೋ

ಖೋ ಖೋ
ಯಾರೂ ಕೊಟ್ಟಿಲ್ಲ
ಕೊಡದಿದ್ದರೇನಂತೆ
ಹಾಳೆ ನನದು
ಪೆನ್ನು ನನದು
ತಾಕತ್ತಿದ್ದರೇ ಓದಿಸಿಕೊಳ್ಳುತ್ತದೆ
ಇಂದೋ? ನಾಳೆಯೋ? ಸತ್ತ ಮೇಲೋ?
ಅರೇ ಓದಿಸಿಕೊಳ್ಳದಿದ್ದರೇನಂತೆ?
ಆದರೂ ಅರ್ಥವಿದೆ;ಪ್ರತಿಯೊಂದು ವಸ್ತುವಿಗೂ ತನದೇ ಆದ ಬೆಲೆ ಇದೆ
ನನ್ನಪ್ಪ ಒಳ್ಳೆಯ ರೈತ
ಜಮೀನು ಇಲ್ಲವೆಂದು
ಬಿತ್ತನೆ ಬೀಜ ಕೈಸಾಲ ಸಿಗಲಿಲ್ಲವೆಂದು ಸಾಯಲಿಲ್ಲ
ಖೋ ಕೊಡಲಿಲ್ಲ ವೆಂದು ಉಳುಮೆ ಮರೆಯಲಿಲ್ಲ
ಸ್ನೇಹ ಸರಪಣಿಯಲ್ಲೂ ಸ್ವಾರ್ಥದ ವಿಷವಿರುತ್ತೆ
ಮಿತಿಯ ಮೈಲಿಗೆಯ ಮೋಸವದು
ಖೋ ಬೇಕಿಲ್ಲ , ಕೊಡ್ತೀನಿ ತಗೋ
ಖೋ ಯಾರಪ್ಪನದ್ದೂ ಅಲ್ಲ, ತಗೊಳ್ಳಿ ಎಲ್ಲ
ನನ್ನಾಪ್ತರಲ್ಲದವರು, ಗೊತ್ತಿಲ್ಲ ದವರು, ಗೊತ್ತಾಗಬೇಕಿರುವವರು
ನಿರ್ಭಾಗ್ಯರು, ತಿರಸ್ಕೃತರು,ಲೋಕನಿಂದಿತರು ಎಲ್ಲರಿಗೂ ಖೋ
ನಿಮ್ಮನ್ನೂ ನಾನು ಓದಬೇಕಿದೆ

Tuesday, September 16, 2014

ಕಾಲ ಕವಿಯೋ? ಕೇವಲ ಬರೆಯುವವನೋ?



ಎಲೆ ಎಳೆಯ ಸೀರೆ ಹರಿದು ಮರ ಬೆತ್ತಲಾಗುತ್ತದೆ
ಕಾಮುಕ ಕಟುಕರಿಗದು ಹೇಳಿ ಮಾಡಿಸಿದ ಕಾಲ
ಭವಿತವ್ಯಂಭವತ್ಯೇವ (ಆಗಬೇಕಾದ್ದು ಆಗೇ ಆಗುತ್ತೆ)
ಭುವಿಗೆ ಬಿದ್ದ ಬೀಜವೇ ಭ್ರೂಣವಾಗುತ್ತೆ
ಇಲ್ಲಿ ಗಂಡು ಬೀಜವೋ? ಭುವಿಯೇ ಹೆಣ್ಣೋ?
ಬೆತ್ತಲ ಬುಡದಲ್ಲೇ ಬೀಜದ್ಹೊಟ್ಟೆ ಬಿರಿಯುತ್ತದೆ
ಬೂದು ಬಣ್ಣಕ್ಕೆ ತಿರುಗಿ ಬಿಳಿ ಮೊಳಕೆಯೊಡೆಯುತ್ತದೆ
ಕಾಲನ ಕಾವ್ಯದ ಮುಂದೆ ಕವಿ ಬರೀ ಪುಟಗೋಸಿ
ವಸಂತದ ವಾಂತಿಗೆ ವಸುಧೆಗೊಂದು ಹಸಿರು ಸೀರೆ
ಮತ್ತದೇ ಕಾಲನ ಸೀಮಂತದ ಸಾಹಿತ್ಯದಬ್ಬ
ಹಲ್ಲೂ ಇಲ್ಲದ ಹೂವು ಬಿರಿಯುವುದೊಂದು ಸೊಗಸು
ಅದನ್ನೇ ಬರೆಬರೆದು ಸಾಯುವುದೊಂದು ವ್ಯಸನ
ಬಿರಿಸುವ ಕಾಲ ಕವಿಯೋ? ಕೇವಲ ಬರೆಯುವವನೋ?
ಜೇನು ಸವರಿದ ಚೂಪು ಕೈಗತ್ತಿಯುಗುರುಗಳು ಸುಳಿಯುತ್ತವೆ
ಎಲೆ ಮುಚ್ಚಿದ ಕಸಿಗಾಯಿಯ ಮೇಲೂ ಹಸಿಬಿಸಿ ಕೌತುಕ
ಕಾಯಿರೋ, “ಕಾಯ್ದರೆ ಕೆನೆಯೇ ಸಿಗುತ್ತದೆಯಂತೆ”
ಬೆದಕಿ ಬರೆಯುವುದು ಕೃತಿ ಚೌರ್ಯ;ಕಾಲನ ಕಾವ್ಯ
ನಿಚ್ಚಂ ಪೊಸತು ಅಂದ್ರೂ ಎಲ್ಲಕ್ಕೂ ಅಪ್ಪಂದಿರಿದ್ದಾರೆ
ಅದನ್ನೇ ಬೇರೆ ಬೇರೆ ರೀತಿ ಬರೆಬರೆದು ಸಾಯಬೇಕಷ್ಟೇ
ಮುಖವಿರದ, ಕೈ ಮೊದಲೇ ಇರದ ಕಾಲನದೆಂಥಾ ಕಾವ್ಯ?
ಕಾರಿಕೊಳ್ಳುವ, ಕದಿಯುವ, ಕೆತ್ತುವ, ಕಚ್ಚುವ ನಮದೆಂಥಾ ಅಕ್ಷರ?
ಆಸೆಯ, ಅಶ್ರು ರೇಖೆಯ ಚಿತ್ರವಿಚಿತ್ರ ಕಲಾಕೃತಿ ಪ್ರಕೃತಿಯಲ್ಲ
ಪರಿವ್ರಾಜಕ ನಿಸರ್ಗದ ಮುಂದೆ ನಾನಂತೂ ಬೆತ್ತಲಾದ ಭ್ರಷ್ಟ
ಭಾವೋದ್ವೋಗದಲ್ಲಿ ಬಿರಿದುಕೊಂಡ ಕೂದಲೆಲ್ಲಾ ಕಾವ್ಯವೂ ಅಲ್ಲ
ವಸಂತಗಳೊಂದಿಗೆ ನಾನು, ಗಾಯಗಳು ಕೆತ್ತಿದ ಅರೆ ಶಿಲ್ಪವಷ್ಟೇ
 -ಬಸವರಾಜು ಕ್ಯಾಶವಾರ

Friday, September 12, 2014

ಕಾಲನ ಕಾವ್ಯ



ಎಲೆ ಎಳೆಯ ಸೀರೆ ಹರಿದು ಮರ ಬೆತ್ತಲಾಗುತ್ತದೆ
ಕಾಮುಕ ಕಟುಕರಿಗದು ಹೇಳಿ ಮಾಡಿಸಿದ ಕಾಲ
ಭವಿತವ್ಯಂಭವತ್ಯೇವ (ಆಗಬೇಕಾದ್ದು ಆಗೇ ಆಗುತ್ತೆ)
ಭುವಿಗೆ ಬಿದ್ದ ಬೀಜವೇ ಭ್ರೂಣವಾಗುತ್ತೆ
ಇಲ್ಲಿ ಗಂಡು ಬೀಜವೋ? ಭುವಿಯೇ ಹೆಣ್ಣೋ?
ಬೆತ್ತಲ ಬುಡದಲ್ಲೇ ಬೀಜದ್ಹೊಟ್ಟೆ ಬಿರಿಯುತ್ತದೆ
ಬೂದು ಬಣ್ಣಕ್ಕೆ ತಿರುಗಿ ಬಿಳಿ ಮೊಳಕೆಯೊಡೆಯುತ್ತದೆ
ಕಾಲನ ಕಾವ್ಯದ ಮುಂದೆ ಕವಿ ಬರೀ ಪುಟಗೋಸಿ
ವಸಂತದ ವಾಂತಿಗೆ ವಸುಧೆಗೊಂದು ಹಸಿರು ಸೀರೆ
ಮತ್ತದೇ ಕಾಲನ ಸೀಮಂತದ ಸಾಹಿತ್ಯದಬ್ಬ
ಹಲ್ಲೂ ಇಲ್ಲದ ಹೂವು ಬಿರಿಯುವುದೊಂದು ಸೊಗಸು
ಅದನ್ನೇ ಬರೆಬರೆದು ಸಾಯುವುದೊಂದು ವ್ಯಸನ
ಬಿರಿಸುವ ಕಾಲ ಕವಿಯೋ? ಕೇವಲ ಬರೆಯುವವನೋ?
ಜೇನು ಸವರಿದ ಚೂಪು ಕೈಗತ್ತಿಯುಗುರುಗಳು ಸುಳಿಯುತ್ತವೆ
ಎಲೆ ಮುಚ್ಚಿದ ಕಸಿಗಾಯಿಯ ಮೇಲೂ ಹಸಿಬಿಸಿ ಕೌತುಕ
ಕಾಯಿರೋ, “ಕಾಯ್ದರೆ ಕೆನೆಯೇ ಸಿಗುತ್ತದೆಯಂತೆ”
ಬೆದಕಿ ಬರೆಯುವುದು ಕೃತಿ ಚೌರ್ಯ;ಕಾಲನ ಕಾವ್ಯ
ನಿಚ್ಚಂ ಪೊಸತು ಅಂದ್ರೂ ಎಲ್ಲಕ್ಕೂ ಅಪ್ಪಂದಿರಿದ್ದಾರೆ
ಅದನ್ನೇ ಬೇರೆ ಬೇರೆ ರೀತಿ ಬರೆಬರೆದು ಸಾಯಬೇಕಷ್ಟೇ
ಮುಖವಿರದ, ಕೈ ಮೊದಲೇ ಇರದ ಕಾಲನದೆಂಥಾ ಕಾವ್ಯ?
ಕಾರಿಕೊಳ್ಳುವ, ಕದಿಯುವ, ಕೆತ್ತುವ, ಕಚ್ಚುವ ನಮದೆಂಥಾ ಅಕ್ಷರ?
ಆಸೆಯ, ಅಶ್ರು ರೇಖೆಯ ಚಿತ್ರವಿಚಿತ್ರ ಕಲಾಕೃತಿ ಪ್ರಕೃತಿಯಲ್ಲ
ಪರಿವ್ರಾಜಕ ನಿಸರ್ಗದ ಮುಂದೆ ನಾನಂತೂ ಬೆತ್ತಲಾದ ಭ್ರಷ್ಟ
ಭಾವೋದ್ವೋಗದಲ್ಲಿ ಬಿರಿದುಕೊಂಡ ಕೂದಲೆಲ್ಲಾ ಕಾವ್ಯವೂ ಅಲ್ಲ
ವಸಂತಗಳೊಂದಿಗೆ ನಾನು, ಗಾಯಗಳು ಕೆತ್ತಿದ ಅರೆ ಶಿಲ್ಪವಷ್ಟೇ
-ಬಸವರಾಜು ಕ್ಯಾಶವಾರ

Monday, September 1, 2014

ಮೋಡಿಗ್ಲಿಯಾನಿ



ಗಂಟಲಿಗಿಳಿದೇ ಇತ್ತು ಮಲೆತ ದ್ರಾಕ್ಷಿಯ ನೆತ್ತರು; ಒಗರು
ಬೀದಿ ಬದಿಯಲ್ಲೋ, ಕೊಳದ ಬುಡದಲ್ಲೋ ಕೂರುತ್ತಿದೆ
ಅಲ್ಲೇ ಕತ್ತಲುಂಡು ಬೆಳಕು ಕಕ್ಕಿದ ಕಲಾಕೃತಿಗಳ ಕೇಕೆ
ಗೆಳೆಯನಂಥಾ ಶತ್ರು ಪಿಕಾಸೋ ನೆನಪಾಗುತ್ತಿದ್ದ
ಬೆಕ್ಕಿನಂತೆ ಪರಚುತ್ತಿದೆ,ಪೀಡಿಸುತ್ತಿದೆ ಸಹಿಸಿ ಕನಲುತ್ತಿದ್ದ
ನನ್ನದೇ ವಿಕ್ಷಿಪ್ತ ಮುಖದ ಗೆರೆಯ ಬರೆ ಎಳೆದುಬಿಡುತ್ತಿದ್ದ
ಹಾಳೆಯ ಮೇಲೆ ನನದೊಂದು ಚಿತ್ರ ಸಾಯುತ್ತಿತ್ತು
ಚಂದ್ರನೊಡಲ ಭ್ರೂಣದಲ್ಲಿ ಕಂದಮ್ಮ ಕುಣಿಯುತಿತ್ತು
ನನ್ನ​ ಹೆಬುಟರ್ನೆಯ ತೀರದ ಸಂಕಟಕ್ಕೆ ಸಾಕ್ಷಿಯಾಗಿ
ಅವಳೊಬ್ಬಳು ಇಲ್ಲದಿದ್ದರೇ ನಾನೆಂಥಾ ಕಲಾಕಾರ?
ಸದಾ ಹೊಸ ಬಸಿರಿಗೆ, ಹಾಳೆಯ ಮೇಲೆ ಕಾರುವ ಕಾಮುಕ
ಮುದ್ದಾದ ಬೆರಳಿಗೊಂದೇ ಒಂದು ರಿಂಗೂ ತೊಡಲಿಲ್ಲ
ಬೆವರಿಗವಳು ಬಸಿರಾಗಿ ಮುಳ್ಳುಹಂದಿಯ ಪಾಲಾದಳು
ಪ್ರಯೋಜನಕ್ಕೆ ಬರುತ್ತಾನೆಂಬ ಉತ್ಕಟ ಆಸೆಯಿಂದ
ಪ್ಯಾಬ್ಲೋನಂತೆ ಕಾಸಿಗಾಗಿ, ತೆಕ್ಕೆಗಾಗಿ ಗೀಚಲಾಗಲಿಲ್ಲ
ದೌಲತ್ತಿನ ದರ್ಬಾರಿನಲ್ಲಿ ಅವನೊಂದಿಗೆ ದಮ್ಮೂ ಎಳೆಯಲಿಲ್ಲ
ಹಾಗಂತ ಅವನೆನೂ ಕಮ್ಮಿಯಲ್ಲ, ಅವನದ್ದೂ ಬಿಗಿ ಕುಂಚ
ಜೀನ್​ಳ ಕಣ್ಣೀರದ್ದಿದ ನನ್ನ ಕುಂಚಕ್ಕೆ ಉಸಿರು ಹೊಯ್ಯುವ ಶಕ್ತಿಯಿತ್ತು
ಅವಳಂತರಾಳದ ಭಾವಬಣ್ಣದ ಬಟ್ಟಲು ಬೇಕಾದ ಹಾಗೆ ಬಿರಿಯುತ್ತಿತ್ತು
ನನ್ನ ಹೊಲಸು ನುಂಗಿದ್ದ ಅವಳ ಗರ್ಭಗುಡಿಯ ಮೇಲ್ಲೊಂದು ಗೌನು
ಕಡುನೀಲಿ ಬಣ್ಣದ ಬರೀ ಬಟ್ಟೆಯಲ್ಲಿ ನನದೇ ನೋವಿನ ಸಾವಿರ ನೂಲು
ನನಗಾಗಿಯೇ ಅತ್ತು ಕಸೂತಿ ಹಾಕಿದ ಸ್ವೆಟರು ಮಗಳುಟ್ಟಳಷ್ಟೇ
ಗೋಲಿಗುಂಡಿನಂಥಾ ಅವಳ ಇಳಿಬಿದ್ದ ಕಣ್ಣು ನನ್ನ ವಸ್ತು
ಸತ್ತು ಸತ್ತೂ ಸಮಾಧಿಗಿಳಿಯದ ಸಂದಿಗ್ಧನ ಮೋಕ್ಷ ಅವನ ಚಿತ್ರ
-ಬಸವರಾಜು ಕ್ಯಾಶವಾರ


Sunday, August 31, 2014

ಕಕ್ಕಲು ಅದಕ್ಕೆ ಬಾಯಿಲ್ಲ...!



ನುಂಗುವುದಷ್ಟೇ, ಕಕ್ಕಲು ಅದಕ್ಕೆ ಬಾಯಿಲ್ಲ
ಅಲ್ಲಿ ಎರಗುವುದಷ್ಟೇ ಅಲ್ಲ, ಕರುಗುವುದೂ ಉಂಟೂ
ಕೊನರಿದರೂ,ಕೂಗಿದರೂ ಅಲ್ಲಿ ಕಿವಿಯೇ ಕಣ್ಣು
ಭಾಷೆಯ, ಶಬ್ದ, ಪದಗಳ ಭಿಕ್ಷೆ ಅಲ್ಲಿಲ್ಲ
ಬಿಗಿ ಭಾವಕ್ಕೆ ಭಾಷೆ ಬರೀ ಬೆಂಡು
ಸೋತವನ ಸೆಳೆದಪ್ಪುವ ಸೂಳೆಯವಳು
ತಿರಸ್ಕೃತನ ತಾಯವಳು
ಲೋಕನಿಂದಿತನ ಲೋಕವದು
ಶತಕೋಟಿ ಸ್ರಾವ ನುಂಗುವ ದಡವಿರದ ಸಾಗರವದು
ಸುಖದ ದಾರಿಗೆ ನಡೆದು ನೋವುಣ್ಣುವ ಕತ್ತೆಯದು
ಬಿಚ್ಚಿ, ಒಪ್ಪು-ತಪ್ಪುಗಳ ಲೆಕ್ಕ ಹಾಕುವ ಗಣಕವದು
ಹರಿಯುವ, ಉಕ್ಕುವ, ಕೊಳೆ ತೊಳೆವ ಪವಿತ್ರ ನದಿಯದು
ಅಪಾತ ಆತ್ಮಗಳ ಅನುಭೂತಿಯ ಅರವಟ್ಟಿಗೆಯದು
ಭೂತದ ಬಾಣಂತನವದು, ಭವಿಷ್ಯದ ಭ್ರೂಣವದು
ಮನುಷ್ಯನೊಳಗಿನ ಮೃಗ ಮೆಲ್ಲಗೆ ಹುಟ್ಟುವ ಹೆರಿಗೆಯದು
ಸತ್ಯದ ಹೆಂಡ ತುಂಬಿದ ತೂತು ಬಿದ್ದ ಕೊಡವದು
ನುಂಗುವುದಷ್ಟೇ,ಅದಕ್ಕೆ ಕಕ್ಕಲು ಬಾಯಿಲ್ಲ
ಗುಟುರು ಹಾಕಲು ಗಂಟಲಿಲ್ಲ
ನೋಡಲು ಕಣ್ಣಿಲ್ಲ, ಮುಟ್ಟಲು ಮೈಯಷ್ಟೇ ಇದೆ
ನಗಲು ಹಲ್ಲುಗಳಿಲ್ಲ, ಮೂಸಲು ಮೂಗಿಲ್ಲ
ನಿರ್ವಿಕಾರದ ದೈವವದು, ದೆವ್ವವದು
ಮಾರ್ಗ ತೋರಿಸದೆಯೂ ಮಾಗಿಸುವ ಮರ್ಮವದು
ಅರಿಕೆ ಅಗಾಧ, ಹರವು ಅನಂತ, ತೋರಿಕೆಯೊಂದಿಲ್ಲವಷ್ಟೇ.
-ಬಸವರಾಜು ಕ್ಯಾಶವಾರ